ಏನನ್ನಾದರೂ ಖರೀದಿಸಲೆಂದು ಮಾರುಕಟ್ಟೆಗೆ ಹೋಗುವಾಗ ಆ ವಸ್ತುವಿನ ಗುಣಗಳ ಬಗ್ಗೆ ತಿಳಿದು ಅದಕ್ಕೆ ತಕ್ಕಂತೆ ಮಾನಸಿಕವಾಗಿ ಒಂದು ಮೊತ್ತವನ್ನು ನೀಡಲು ನಿರ್ಧರಿಸಿರುತ್ತೇವೆ (ಸದ್ಯಕ್ಕೆ "ಬ್ರ್ಯಾಂಡ್" ಮುಂತಾದವುಗಳ ಬಗ್ಗೆ ಯೋಚಿಸುವುದು ಬೇಡ). ಮಾರುಕಟ್ಟೆಗೆ ಹೋದಾಗ 'ಅ' ವಸ್ತು ಸಿಕ್ಕ ನಂತರ, ಮತ್ತು ಅದೇ ಗುಣಗಳುಳ್ಳ ಇನ್ನೊಂದು ವಸ್ತು 'ಬ' ಸಿಕ್ಕಿದ ನಂತರ ಅಲ್ಲೇ ಇರುವ ಮಾರಟಗರನಿಗೆ "ಇವುಗಳ ಬೆಲೆ ಎಷ್ಟು?" ಎಂದು ಕೇಳಿದಾಗ 'ಅ'ಗೆ ರೂ.೧೫, 'ಬ'ಗೆ ರೂ.೧೦ ಎಂದು ಹೇಳಿದಾಗ ನಿಶ್ಚಯವಾಗಿ 'ಬ' ವನ್ನು ಕೊಂಡುಕೊಳ್ಳುತ್ತೇವೆ. ಇದನ್ನೇ "ಲಾ ಆಫ್ ಡಿಮಂಡ್" ಅಥವಾ "ಬೇಡಿಕೆಯ ನಿಯಮ" ಎಂದು ಕರೆಯುತ್ತೇವೆ. ಇದರಂತೆ ಎಲ್ಲವೂ ಸಮಾನವಾಗಿದ್ದಲ್ಲಿ, ನಾವು ವಸ್ತುವನ್ನು ಕೊಂಡುಕೊಳ್ಳುವ ನಿರ್ಧಾರ ಆ ವಸ್ತುವಿನ ಬೆಲೆಯ ಮೇಲೆ ಆಧಾರಿತವಾಗಿದೆ; ಬೆಲೆ ಹೆಚ್ಚಿದ್ದಲ್ಲಿ ಆ ವಸ್ತುವಿನ ಬೇಡಿಕೆ ಕಡಿಮೆ ಆಗುತ್ತದೆ, ಬೆಲೆ ಕಡಿಮೆ ಇದ್ದಲ್ಲಿ ಅದರ ಬೇಡಿಕೆ ಹೆಚ್ಚುತ್ತದೆ. ಇದನ್ನು ಕೆಳಕಂಡ "ಡಿಮಾಂಡ್ ಗ್ರ್ಯಾಪ್ಹ್" ನಲ್ಲಿ ತೋರಿಸಿದ್ದಾರೆ.
ಸದ್ಯಕ್ಕೆ ನಾನೊಬ್ಬ ತರಕಾರಿ ವರ್ತಕನೆಂದು ಕೊಳ್ಳೋಣ, ನನ್ನ ಹತ್ತಿರ, ಸಾಕಷ್ಟು ಭೂಮಿ ಇದ್ದು, ಅದರಲ್ಲಿ ಬೆಳೆಸಿದ ಬೂದುಕುಂಬಳಕಾಯಿಯನ್ನು ತಲಾ ರೂ. ೨೦ಕ್ಕೆ ಮಾರುತ್ತಿರುವಾಗ ಯಾರೋ ಇನ್ನೊಬ್ಬ ವರ್ತಕನು ಬಂದು ನನಗೆ ನಿನ್ನಲ್ಲಿರುವ ಎಲ್ಲಾ ಕುಂಬಳಕಾಯಿಗಳನ್ನೂ ನೀಡು, ಪ್ರತಿಯೊಂದಕ್ಕು ರೂ. ೨೫ ಕೊಡುತ್ತೇನೆ, ಎಂದಾಗ ನಾನು ಒಪ್ಪಿ ಕೊಳ್ಳುತ್ತೇನೆ - ನನಗೆ ಲಾಭ ಹೆಚ್ಚಾಗುತಿದ್ದಲ್ಲಿ ನಾನ್ಯಾಕೆ ಬಿಡಲಿ? ಅಂತೆಯೇ ಈ ಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು "ಲಾ ಆಫ್ ಸಪ್ಲೈ" (ಪೂರೈಕೆಯ ನಿಯಮ) ನಿರ್ಮಿಸಿದ್ದಾರೆ. ಇದನ್ನೇ ನಾವು "ಸಪ್ಲೈ ಗ್ರ್ಯಾಪ್ಹ್" ನಲ್ಲಿ ತೋರಿಸಿದ್ದೇವೆ.
ಇವೆಲ್ಲದರ ಪ್ರಾಮುಖ್ಯತೆ ನಾವು ಕೈಗೊಳ್ಳುವ ನಿರ್ಧಾರಗಳಲ್ಲಿ ಅತೀ ಮುಖ್ಯವಾಗಿರುತ್ತವೆ. ಇನ್ನು ಮುಂಬರುವ ಅಂಕಣಗಳಲ್ಲಿ ಸಮೀಪವಾಗಿ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡುವೆವು.
No comments:
Post a Comment