ಮಾರುಕಟ್ಟೆಯ ಲಕ್ಷಣ ನಿರೂಪಣೆ ಕುರಿತು ಈ ಹಿಂದಿನ ಅಂಕಣದಲ್ಲಿ ನಾವು ತಿಳಿದುಕೊಂಡೆವು. ಇಂದಿನ ಅಂಕಣದಲ್ಲಿ ಮಾರುಕಟ್ಟೆಯ ಪರಿಮಿತಿಯ ಬಗ್ಗೆ ತಿಳಿದುಕೊಳ್ಳೋಣ. ಯಾವುದೇ ವಸ್ತು ಅಥವಾ ವಿಚಾರಕ್ಕೆ ಸರಹದ್ದನ್ನು ನಿಗದಿಪಡಿಸದೇ ಇದ್ದಲ್ಲಿ ಅದನ್ನು ಅರ್ಥೈಸಿಕೊಳ್ಳುವುದು ಕಷ್ಟ ವಾಗುತ್ತದೆ, ಇದರಂತೆ ಮಾರುಕಟ್ಟೆಯ ಪರಿಮಿತಿಯನ್ನು ನಿಗದಿ ಪಡಿಸಲು ಎರಡು ವಿಷಯಗಳು ಬಹು ಮುಖ್ಯ - ಮಾರುಕಟ್ಟೆಯ ಭೌಗೋಳಿಕ ಪರಿಮಿತಿ ಮತ್ತು ಅದರಲ್ಲಿ ವ್ಯವಹಾರಕ್ಕೆ ಒಳಗಾಗುವ ವಸ್ತುಗಳು.
ಮಾರುಕಟ್ಟೆಯ ನಿರೂಪಣೆಯಲ್ಲಿ ಇದೆರಡನ್ನು ನಿಶ್ಚಯಿಸದೇ ಇದ್ದಲ್ಲಿ ಗೊಂದಲಮಯ ಪ್ರಶ್ನೆಗಳು ಉದ್ಭವವಾಗುವುವು. - ಉದಾಹರಣೆಗೆ "ಪೆಟ್ರೋಲ್" ನ ಮಾರುಕಟ್ಟೆ ಎಂದರೆ, ಅದು ಕೇವಲ ಬೆಂಗಳೂರಿಗೆ ಸೀಮಿತವೋ ಅಥವಾ ಇಡಿ ಭಾರತಕ್ಕೆ ವಿಸ್ತರಿಸುತ್ತದೆಯೋ? ಯಾವ "ಒಕ್ಟೇನ್" ಸಂಖ್ಯೆಯಿರಬೇಕು? ಸೀಸ ಮಿಶ್ರಿತವಾಗಿರಬೇಕೋ ಅಥವಾ ಇರಕೂಡದೋ? "ಡೀಸಲ್"ಅನ್ನು ಇದರೊಂದಿಗೆ ಸೇರ್ಪಡಿಸಬೇಕೋ ಬೇಡವೋ? ಮುಂತಾದ ಹಲವು ಪ್ರಶ್ನೆಗಳು ಬರುವುದು ಸಹಜ. ಇವೆಲ್ಲದರ ಸರಿಯಾದ ಪರಿಹಾರಕ್ಕೆ ಮಾರುಕಟ್ಟೆಯ ಸರಹದ್ದು ಅಥವಾ ಪರಿಮಿತಿಯನ್ನು ನಿಗದಿ ಪಡಿಸಬೇಕು.
ಮಾರುಕಟ್ಟೆಯ ಪರಿಮಿತಿಯನ್ನು ನಿಶ್ಚಯಿಸುವುದರಿಂದ ಎರಡು ನಿಚ್ಚಳ ಲಾಭವಾಗಲಿವೆ:
- ಕಂಪನಿಯ ದೃಷ್ಟಿಕೋನದಿಂದ: ಮಾರುಕಟ್ಟೆಯಲ್ಲಿ ನಮ್ಮ ಇಂದಿನ ಮತ್ತು ಮುಂಬರುವ ಸ್ಪರ್ಧಿಗಳನ್ನು ಗುರುತಿಸುವುದು ಸುಲಭವಾಗುತ್ತದೆ. ನಮ್ಮ ಇಂದು ಮತ್ತು ಭವಿಷ್ಯದಲ್ಲಿ ತಯಾರಿಸುವ ವಸ್ತುಗಳ ಬೇಡಿಕೆಯನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ; ಅದರ ಭೌಗೋಳಿಕ ಪರಿಮಿತಿ ಮತ್ತು ಅದಕ್ಕೆ ಬರಬಹುದಾದ ಸ್ಪರ್ಧೆಯನ್ನು ನಿಶ್ಚಯಿಸುವುದು ಸುಲಭವಾಗುತ್ತದೆ.
- ದೇಶದ ಅರ್ಥವ್ಯವಸ್ತೆಯ ದೃಷ್ಟಿಕೋನದಿಂದ: ಮಾರುಕಟ್ಟೆಯಲ್ಲಿ ಸಂಭವಿಸುವ ಕಂಪನಿಗಳ ಒಕ್ಕೂಟ ಮತ್ತು ಸೇರ್ಪಡೆಯನ್ನು ನಿಗ್ರಹಿಸುವುದು ಮುಖ್ಯ. ಇವುಗಳಿಂದ ಆಗುವ ದರ ಪರಿವರ್ತನೆ, ಮತ್ತು ಮುಂದೆ ಆಗಬಹುದಾದ ಪರಿಣಾಮಗಳನ್ನೆಲ್ಲ ಅವಲೋಕಿಸಿ ತಮ್ಮ ನಿರ್ಧಾರಗಳಿಂದ ಇವುಗಳಿಗೆ ಅನುಮತಿ ನೀಡಬಹುದು ಅಥವಾ ನಿಷೇಧಿಸಬಹುದು.
No comments:
Post a Comment