Pages

Thursday, June 16, 2011

ವ್ಯಾವಹಾರಿಕ ಯುಕ್ತಿ - ೨೦

ಹಿಂದಿನ ಅಂಕಣ
ದಲ್ಲಿ ನಾವು ಉತ್ಪಾದಕತ್ವದ ವ್ಯಾಖ್ಯಾನಿಸುವ ಪ್ರಯತ್ನ ಮಾಡಿದೆವು. ಇಂದಿನ ಅಂಕಣದಲ್ಲಿ ಒಂದು ಉದಾಹರಣೆಯೊಂದಿಗೆ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ. ನಾವು ಒಂದು ದಿನ ನಿತ್ಯದ ನಮ್ಮ ಚಟುವಟಿಗೆಯ ಒಂದು ಸಂದರ್ಭದಿಂದ ಆರಂಭಿಸಿ ಒಂದು ಉದ್ಯಮದ ವರೆಗೆ ಅದನ್ನು ಮುಂದುವರೆಸಿ ಉತ್ಪಾದಕತ್ವವನ್ನು ಅರಿಯೋಣ.

ಸಾಮಾನ್ಯವಾಗಿ ನಾವು ಸದಾ ವಿನಿಯೋಗಿಸಲು ಇರುವ ಸಂಪನ್ಮೂಲವೆಂದರೆ "ಸಮಯ" ನಾವು ನಮ್ಮ ಸಮಯವನ್ನು ವಿನಿಯೋಗಿಸುವ ವಿಚಾರಗಳನ್ನು ಗಮನಿಸಿದಾಗ, ನಮಗರಿವಾಗುವುದು ಏನೆಂದರೆ ನಾವು ನಮ್ಮ ಸಮಯದ ಸದುಪಯೋಗ ಮಾಡಲು ಬಯಸುತ್ತೇವೆ. ನಾವು ಚಿಕ್ಕ ಮಕ್ಕಳಿಗೆ ಅವರಿಗೆ ಅರಿಯಲು ಕಷ್ಟವಾಗುವ ಪಾಠಗಳನ್ನು ಹೇಳಿಕೊಡಬಹುದು, ಇಲ್ಲವೇ ಒಂದು ಉತ್ತಮ ಪುಸ್ತಕ ಓದಬಹುದು, ಇಲ್ಲವೇ ನಮ್ಮ ಹವ್ಯಾಸಗಳಲ್ಲಿ ನಮ್ಮನ್ನು ತೊಡಗಿಸಬಹುದು ಹೀಗೆ ನಾವು ಸಮಯವನ್ನು ಸದುಪಯೋಗ ಗೊಳಿಸಲು ಯತ್ನಿಸುತ್ತೇವೆ. ನಮಗೆ ಸಿಗುವ ತೃಪ್ತಿ ಮತ್ತು ಖುಷಿಯನ್ನು ಪರಿಗಣಿಸಿಕೊಂಡು ನಾವು ನಮ್ಮ ಸಮಯದ ವಿನಿಯೋಗವನ್ನು ಒಂದು ಕಡೆ ಮುಂದುವರಿಸಬೇಕೋ ಬೇಡವೋ ಎಂದು ನಿರ್ಧರಿಸುತ್ತೇವೆ.

ಈಗ ನಾವು ವ್ಯಾವಹಾರಿಕ ಸಂದರ್ಭದೆಡೆಗೆ ಗಮನಿಸೋಣ. ಬೆಂಗಳೂರಿನ ಒಬ್ಬ ಕ್ಯಾಬ್ ಡ್ರೈವರ್ ನೊಡಗಿನ ನನ್ನ ಸಂಭಾಷಣೆಯಿಂದ ನನಗೆ ಅವರ ವ್ಯವಹಾರದ ಒಳ ಗುಟ್ಟು ತಿಳಿಯಿತು. ಇದನ್ನು ನಿಮ್ಮ ಮುಂದೆ ಇಡುವೆನು. ಬೆಂಗಳೂರಿನಲ್ಲಿ ಸಾಕಷ್ಟು ಕಂಪನಿಗಳಿಗೆ ವಿವಿಧ ಟ್ರಾವೆಲ್ ಕಂಪನಿಯವರು ಅಥವಾ ಏಜೆನ್ಸಿಯವರು ತಮ್ಮ ಕ್ಯಾಬ್ ಸೇವೆಯನ್ನು ಒದಗಿಸುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ ನೀಡಿದ ಕ್ಯಾಬ್ ಗಳ ಮಾಲೀಕರು ಅವರೇ ಆಗಿರುವುದಿಲ್ಲ. ಅದು ಒಬ್ಬ ವ್ಯಕ್ತಿಯ ಸ್ವತ್ತಾಗಿದ್ದು ಅದನ್ನು ಆತ ಈ ಏಜೆನ್ಸಿ ಗಳಿಗೆ ನೀಡಿರುವನು.

ನಾವು ಕ್ಯಾಬ್ ನ ಮಾಲೀಕನ ದೃಷ್ಟಿಕೋನದಿಂದ ನೋಡಿದರೆ (ಆತ ಹೆಚ್ಚು ದುಡ್ಡು ಮಾಡಬೇಕೆಂದು ಇರುವುದಂತೂ ಖಂಡಿತ) ಆತನು ತನ್ನ ಕ್ಯಾಬ್ ನ್ನು ತಾನೇ ಓಡಿಸಬಹುದಿತ್ತು, ಅಥವಾ ಒಂದು ಶಾಲೆಗೆ ವಾಹನದ ಒತ್ತಡದ ಸಮಯದಲ್ಲಿ ಉಪಯೋಗಿಸಲು ಕೊಡಬಹುದಿತ್ತು ಅದರ ಬದಲು ಅವನು ಏಜೆನ್ಸಿಗೆ ನೀಡಿದನು.(ಇನ್ನು ಹಲವಾರು ಆಯ್ಕೆಗಳು ಅವನಿಗಿದ್ದರು ನಮ್ಮ ಚರ್ಚೆಗೆ ಇವೆರಡು ಸಾಕು!) ಅವನು ಕಾರ್ ನ್ನು ತನ್ನ ಸ್ವಂತ ಬಳಕೆಗೆ ಉಪಯೋಗಿಸುವುದಕ್ಕಿಂತ ಅವನಿಗೆ ಅದನ್ನು ಬಾಡಿಗೆಗೆ ನೀಡುವುದರಲ್ಲಿ ಹೆಚ್ಚಿನ ಲಾಭ ಕಂಡಿತು. ಆ ಮೂಲಕ ಕಾರ್ ನ ಉತ್ಪಾದಕತ್ವದ ಉಪಯೋಗ ಮಾಡಿಕೊಂಡನು. ಎರಡನೇ ಆಯ್ಕೆಯಾದ, ಕಾರ್ ನ್ನು ಶಾಲೆಗೆ ಶಾಲಾ ವಾಹನದಂತೆ ನೀಡುವುದು ಹೆಚ್ಚಿನ ಆದಾಯವನ್ನು ನೀಡದು. ಕಾರಣ ಶಾಲೆಯವರು ಸದಾ ಕಲ ಬಳಸರು ಹಾಗಾಗಿ ಅವರು ತಮ್ಮ ಕಡಿಮೆ ಬಳಕೆಗೆ ಹೆಚ್ಚು ಹಣವನ್ನೇನು ನೀಡರು. ಅದೇ ಮೂರನೆಯ ಆಯ್ಕೆಯಾದ ಏಜೆನ್ಸಿಗಳಿಗೆ ಬಾಡಿಗೆಗೆ ನೀಡುವುದರಿಂದ ಹೆಚ್ಚಿನ ಆದಾಯವನ್ನು ಅವನು ಗಳಿಸುವನು. ಏಜೆನ್ಸಿಗಳು ಕಾರ್ ನ್ನು ಕಂಪನಿಗಳಿಗೆ ಬೆಳಿಗ್ಗೆ ಮತ್ತು ಸಾಯಂಕಾಲದ ಓಡಾಟಕ್ಕೆ ಬಾಡಿಗೆಗೆ ನೀಡಿ ಉಳಿದ ಸಮಯದಲ್ಲಿ ಟಾಕ್ಸಿ ಯಾಗಿ ಸಾಮಾನ್ಯ ಪ್ರಯಾಣಿಕರನ್ನು ಸಾಗಿಸುವ ಮೂಲಕ ಹೆಚ್ಚಿನ ಆದಾಯ ಗಳಿಸುವರು ಆ ಮೂಲಕ ಮಾಲೀಕನಿಗೆ ಹೆಚ್ಚಿನ ಹಣವನ್ನು ನೀಡುವರು.

ಈ ಮೇಲೆ ಹೇಳಿದ ಉದಾಹರಣೆಯಲ್ಲಿ ಕಾರ್ಯ ನಿರ್ವಹಣೆಯ ಸಮರ್ಪಕ ವ್ಯಾಖ್ಯಾನವು ಉಪಯೋಗಕ್ಕೆ ಬಂದಿರುವುದನ್ನು ಕಾಣುವೆವು. "ಉತ್ಪಾದಕ ಸ್ವತ್ತುಗಳಿಂದ ಒಂದು ಸಂಸ್ಥೆಯು ಸೃಷ್ಟಿಸಲು ಇಚ್ಚಿಸುವ ಆದಾಯ ಮತ್ತು ಆ ಸ್ವತ್ತುಗಳ ಮಾಲೀಕರು ಅವುಗಳಿಂದ ಬಯಸುವ ಆದಾಯದ ಹೆಚ್ಚಳಗಳ ತುಲನೆ."

No comments:

Post a Comment