Pages

Wednesday, February 16, 2011

ವ್ಯವಹಾರ ಪ್ರತಿಕೃತಿ - ಚರ್ಚೆ ಭಾಗ ೧

ಯಾವುದಾದರು ವಾಣಿಜ್ಯ ಅವಕಾಶವನ್ನು ಗುರುತಿಸಿಕೊಂಡಾಗ, ನನ್ನ ಮನಸಿನ್ನಲ್ಲಿ ಬರುವ ಎರಡು ಯೋಚನೆಗಳು - ಇದನ್ನು ನಾನು ಹೇಗೆ ವಾಣಿಜ್ಯ ವ್ಯವಹಾರವನ್ನಾಗಿ ಪರಿವರ್ತಿಸಬಹುದು ಮತ್ತು ಆ ಬೇಡಿಕೆಗೆ ಅನುಗುಣವಾಗಿ ಪೂರೈಕೆಯನ್ನು ಹೇಗೆ ಮಾಡುವುದು. ಈ ಎರಡು ಪ್ರಶ್ನೆಗಳ ಉತ್ತರವೇ ವ್ಯವಹಾರದ ಪ್ರತಿಕೃತಿ (Business Model), ಇದರಿಂದ ಸಂಪಾದನೆ ಆಗುವ ಹಣಕಾಸು ಸಾರ್ಥಕತೆಯ ಪ್ರತೀಕ.

ಇಂತಹ ಪ್ರಮುಖವಾದ ಅಂಶದ ಮೇಲೆ, ಪ್ರತಿ ವ್ಯವಹಾರಿ ಮತ್ತು ವರ್ತಕನು ಗಮನಹರಿಸಲೇ ಬೇಕು, ಆದರೆ ಯಾವುದೇ ಒಂದು ವ್ಯವಹಾರ ಪ್ರತಿಕೃತಿ ಆ ವ್ಯವಹಾರದ ಯಶಸ್ಸಿನ ಭರವಸೆ ನೀಡಲು ಅಸಮರ್ಥವಾಗಿರುತ್ತದೆ. ಒಂದು ವ್ಯವಹಾರಕ್ಕೆ ಯಶಸ್ಸು ಕಾಣಿಸಿದ ಪ್ರತಿಕೃತಿ ಇನ್ನೊಂದಕ್ಕೆ ಯಶಸ್ಸು ನಿಶ್ಚಯಿಸಿರುವುದಿಲ್ಲ , ಪ್ರತಿಯೊಂದು ವ್ಯವಹಾರವು ತನ್ನದೇ ಆದ ಪ್ರತಿಕೃತಿಯನ್ನು ಕಂಡುಹಿಡಿಯತಕ್ಕದ್ದು. ಇದಕ್ಕೆ ಅನುಗುಣವಾಗಿ ವ್ಯವಹಾರದಲ್ಲಿ ಪಾಲ್ಗೊಳ್ಳುವ ಎಲ್ಲರ ಒಳನೋಟ ತುಂಬಾ ಪ್ರಮುಖವಾಗಿರುತ್ತದೆ.

ವ್ಯವಹಾರ ಪ್ರತಿಕೃತಿ ಸರ್ವೇಸಾಮಾನ್ಯವಾಗಿ, ಹೊಸತನದ ಚಿಲುಮೆಯಾಗಿರುತ್ತದೆ. ವ್ಯವಹಾರ ಪ್ರತಿಕೃತಿ ಮತ್ತು ಅದರೊಂದಿಗೆ ಬರುವ ಹೊಸತನದ ಆಧಾರ - ವ್ಯವಹಾರಾಂಗಗಳು, ಅರ್ಥಶಾಸ್ತ್ರ, ಆರ್ಥಿಕತೆ ಮುಂತಾದವುಗಳು. ಒಂದು ಸಾಧಾರಣವಾದ ಆವಿಷ್ಕಾರಕ್ಕೆ ಪೂರಕವಾಗಿ ಒಳ್ಳೆಯ ವ್ಯವಹಾರ ಪ್ರತಿಕೃತಿ ದೊರೆತಲ್ಲಿ, ಅದು ಅತ್ಯಾದ್ಭುತವಾದ ಆವಿಷ್ಕಾರಕ್ಕೆ ದೊರೆತ ಸಾಧಾರಣ ವ್ಯವಹಾರ ಪ್ರತಿಕೃತಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿರುವುದನ್ನು ಕಂಡಿದ್ದೇವೆ. ಯಾವುದೇ ವ್ಯವಹಾರ ಪ್ರತಿಕೃತಿಯ ಯಶಸ್ಸು ಎರಡು ಮುಖ್ಯ ಪ್ರಶ್ನೆಗಳ ಮೇಲೆ ನಿಂತಿದೆ
- ವ್ಯವಹಾರ ಹೇಗೆ ತನ್ನ ಆದಾಯ ಪಡೆಯುವುದು?
- ಆ ಆದಾಯ ಎಷ್ಟು ಬೇಗ ದೊರಕುವುದು?

ಸೂಕ್ತವಾದ ವ್ಯವಹಾರ ಪ್ರತಿಕೃತಿಯನ್ನು ಕಂಡುಕೊಳ್ಳುವುದು, ಈ ಸ್ಪರ್ಧಾತ್ಮಕ ವಾಣಿಜ್ಯ ಕ್ಷೇತ್ರದಲ್ಲಿ ಅತೀ ಮುಖ್ಯವಾದುದು. ಮುಂಬರುವ ಅಂಕಣಗಳಲ್ಲಿ ಇಂತಹ ಹಲವು ವ್ಯವಹಾರ ಪ್ರತಿಕೃತಿಯ ಬಗ್ಗೆ ತಿಳಿಯುವ ಪ್ರಯತ್ನಮಾಡೋಣ.

No comments:

Post a Comment